ತರಂಗಾತ್ಮಕ ಧ್ವನಿವಿಜ್ಞಾನ

	ನಾವು ಮಾತನಾಡುತ್ತಿರುವಾಗ ಏನಾಗುತ್ತದೆ ಎಂಬುದನ್ನು ಪರೀಕ್ಷಿಸಬೇಕಾದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿರುವಂಥ ಒಂದು ಸಾಧಾರಣ ಸಂದರ್ಭವನ್ನು ಪರೀಕ್ಷಿಸಬಹುದು.  ಅವರಲ್ಲಿ ಒಬ್ಬನಾದ ಮಾತನಾಡುವವನು ಮತ್ತೊಬ್ಬನೆಡೆಗೆ ಅಂದರೆ ಕೇಳುಗನೆಡೆಗೆ ವಿಷಯಗಳನ್ನು ಪ್ರೇಷಣೆ ಮಾಡುವನು.  ಈ ಅಭಿವ್ಯಕ್ತಿಶೀಲ ಕ್ರಿಯೆಯಲ್ಲಿ ಘಟನೆಗಳ ಒಂದು ಸರಣಿಯ ಉಂಟು.  ಈ ಮಾತಿನ ಸರಣಿಯ ಮೂರು ಮುಖ್ಯ ಘಟಕಗಳೆಂದರೆ. 1 ಶ್ವರೀಕರಣ ಮತ್ತು ಶಬ್ದೋಚ್ಚಾರಣೆಗಳಿಗೆ ಸಂಬಂಧಿಸಿದ ದೈಹಿಕ ಕ್ರಿಯೆಗಳು. 2 ಈ ದೈಹಿಕ ಕ್ರಿಯೆಗಳಿಂದ ಉತ್ಪತ್ತಿಯಾದ ತರಂಗಾತ್ಮಕ ಸಂಕೇತಗಳು.  3 ಕೇಳುಗ ಈ ತರಂಗಾತ್ಮಕ ಸಂಕೇತಗಳನ್ನು ಗ್ರಾಹ್ಯವಾದ ಸಂದೇಶವನ್ನಾಗಿ ಪರಿವರ್ತಿಸಿಕೊಳ್ಳುವ ಮಾನಸಿಕ ತರಂಗಾತ್ಮಕ ಘಟನೆಗಳು.

	ಈ ಮೂರು ಘಟಕಳು ಉಚ್ಚಾರಣಾತ್ಮಕ, ತರಂಗಾತ್ಮಕ ಮತ್ತು ಶ್ರವಣಾತ್ಮಕ ಧ್ವನಿವಿಜ್ಞಾನದ ವಿಷಯವನ್ನು ಕುರಿತು ಅನುಕ್ರಮವಾಗಿ ಹೇಳುತ್ತವೆ.  ಈ ಎಲ್ಲ ಘಟಕಳು ಪರಸ್ಪರಾವಲಂಬಿಗಳು,  ಪರಸ್ಪರ ಬೇರೆಯಾದವುಗಳಲ್ಲ.  ಉದಾಹರಣೆಗೆ ಮಾತನ್ನು ಉತ್ಪಾದಿಸುವ ದೈಹಿಕಪ್ರಕ್ರಿಯೆಗಳ ಸಾರ್ಥಕವಾದ ಅನೇಕ ಗುಣಲಕ್ಷಣಗಳನ್ನು ತರಂಗಾತ್ಮಕ ಸಂಕೇತಗಳ ಗುಣಗಳಿಂದ ದೊರಕುವ ಮಾಹಿತಿಗಳಿಂದ ತಿಳಿದುಕೊಳ್ಳಬಹುದು.

	ತರಂಗಾತ್ಮಕ ಧ್ವನಿವಿಜ್ಞಾನದ ಆ ಹೆಸರೇ ಸೂಚಿಸಿರುವಂತೆ ಭಾಷಾಧ್ವನಿಗಳ ಭೌತಲಕ್ಷಣಗಳನ್ನು ಕುರಿತು ಹೇಳುತ್ತದೆ.  ಸಂಪೂರ್ಣವಾಗಿ ಭಾಷಿಕ ಲಕ್ಷಣಗಳುಳ್ಳ ಎಲ್ಲ ಧ್ವನಿಗಳೂ ಈ ವ್ಯಾಪ್ತಿಯಲ್ಲಿ ಬರುತ್ತವೆ.  ಸಂಗೀತಧ್ವನಿಗಳು, ಗಲಾಟೆಗಳಂಥ ಇತರ ತರಂಗಾತ್ಮಕ ಘಟನೆಗಳು ಈ ವ್ಯಾಪ್ತಿಯಲ್ಲಿ ಬರುವುದಿಲ್ಲ.

	ಸಂಕ್ಷಿಪ್ತವಾಗಿ ಇದನ್ನು ತಿಳಿಯಬೇಕಾದರೆ ನಾವು ಈ ಅಂಶಗಳತ್ತ ಗಮನಕೊಡಬೇಕು.  (1) ಭಾಷಾ ಉತ್ಪಾದನೆಯ ತರಂಗಾತ್ಮಕತೆ (2) ಭಾಷಾಧ್ವನಿಗಳ ತರಂಗಾತ್ಮಕ ಲಕ್ಷಣಗಳು ಮತ್ತು (3) ಭಾಷಾಧ್ವನಿಗಳ ತರಂಗಾತ್ಮಕ ಗುಣಲಕ್ಷಣಗಳನ್ನು ಕುರಿತು ಅಧ್ಯಯನ ಮಾಡುವ ವಿಧಾನಗಳು.  ಓದುಗರು ಧ್ವನಿಯ ಭೌತಗುಣಗಳ ಬಗ್ಗೆ ಸಾಕಷ್ಟು  ತಿಳಿವನ್ನು ಪಡೆದಿದ್ದಾರೆಂದು ಭಾವಿಸಿ ಭಾಷೆಯ ಉತ್ಪಾದನೆಯ ತರಂಗಾತ್ಮಕ ವಿಚಾರವನ್ನು ಇಲ್ಲಿ ವಿವರಿಸಿದೆ.

	ಭಾಷೆಯ ಉತ್ಪದನೆಯ ತರಂಗಾತ್ಮಕ ವಿಚಾರಗಳು :  ಮನುಷ್ಯನ ಶರೀರದಲ್ಲಿರುವ ಧ್ವನಿಪಥ ಸುಮಾರು 17 ಸೆಂಟಿಮೀಟರ್‍ಗಳಷ್ಟು ಉದ್ದವಾಗಿದೆ ಕಡೆಯ ಒಕ್ಷ ಸ್ವರಗಳನ್ನು ಉತ್ಪಾದಿಸುವಾಗ ಎನ್ನಬಹುದು.  ಅದನ್ನು ಒಂದು ಭಾಗದಲ್ಲಿ ಮುಚ್ಚಿದೆಯೆಂದೂ ಇನ್ನೊಂದು ಭಾಗದಲ್ಲಿ ಅಂದರೆ ತುಟಿಗಳಲ್ಲಿ ತೆರೆದಿದೆಯೆಂದೂ ಪರಿಗಣಿಸಬಹುದು. ಫುಪ್ಪುಸ ಮತ್ತು ಶ್ವಾಸನಾಳಗಳಿಂದ ಬಂದ ಗಾಳಿಯ ಪ್ರವಾಹದಿಂದ ಸ್ವರತಂತುವಿನ ಮಡಿಕೆಗಳು ಕಂಪನಕ್ಕೊಳಗಾಗುವುವು.  ಈ ಕಂಪನಗಳ ಆವರ್ತನ ನಿಜಕ್ಕೂ ಅವುಗಳ ದೃಢತೆ ಮತ್ತು ದ್ರವ್ಯರಾಶಿಗಿಂತಲೂ ಮಿಗಿಲಾಗಿ ಅವುಗಳ ಉದ್ದವನ್ನು ಅವಲಂಬಿಸಿದೆ.  ಸ್ವರತಂತುವಿನ ಮಡಿಕೆಗಳು ಉತ್ಪಾದಿಸಿದ ಧ್ವನಿ ಧ್ವನಿಪಥಕ್ಕೆ ಹೋಗುತ್ತದೆ.  ಧ್ವನಿ ಪಥ ವಾಸ್ತವವಾಗಿ ಒಂದು ಗಾಳಿತುಂಬಿದ ನಳಿಕೆಯಂತಿದ್ದು ಅನುನಾದಕದಂತೆ ಕೆಲಸಮಾಡುತ್ತದೆ.  ಅಂದರೆ ಧ್ವನಿಪಥಕ್ಕೆ ತನ್ನದೇ ಆದ ಕೆಲವು ಸ್ವಾಭಾವಿಕ ಕಂಪನ ಆವರ್ತನೆಗಳಿದ್ದು ಅದು  ತನ್ನ ಆವರ್ತನಕ್ಕೆ ಸಮನಾದ ಆವರ್ತನವುಳ್ಳ ಧ್ವನಿಯ ಅಲೆಗೆ ಬೇರೊಂದು ಆವರ್ತನವುಳ್ಳ ಅಲೆಗಿಂತ ಬೇಗ ಅನುಕ್ರಿಯೆಯನ್ನು ತೋರುತ್ತದೆ.  ಉದಾಹರಣೆಗೆ ಸ್ವರತಂತುವಿನ ಮಡಿಕೆಗಳು ಚಿತ್ರ 1 ಯಲ್ಲಿ ತೋರಿಸಿರುವಂಥ ಸ್ಪಂದÀನಗಳ ಸರಣಿಯನ್ನು ಉತ್ಪಾದಿಸುತ್ತವೆಂದು ಭಾವಿಸಬಹುದು.  ಇಂಥ ಒಂದು ಧ್ವನಿಯ ರೋಹಿತದಲ್ಲಿ ಬಹುಸಂಖ್ಯಾತವಾದ ಘಟಕಗಳಿರುತ್ತವೆ.  ಹೆಚ್ಚು ಕಡಿಮೆ ಇವೆಲ್ಲವುಗಳ ಕಂಪನ  ವೈಶಾಲ್ಯ ಒಂದೆ ಆಗಿದ್ದು ಇವುಗಳ ಆವರ್ತನ ಸಂಖ್ಯೆಗಳು ಮೂಲ ಆವರ್ತನಸಂಖ್ಯೆಯ ಪೂರ್ಣಾಂಕ ಗುಣಗಳಾಗಿರುತ್ತವೆ.  ಈ ರೋಹಿತದ ಅತ್ಯಂತ ಕನಿಷ್ಠ ಆವರ್ತನಸಂಖ್ಯೆಯ ಘಟಕವಾದ ಮೂಲ ಆವರ್ತನ ಸಂಖ್ಯೆಯ ಕಂಪನವೈಶಾಲ್ಯ ವಾಸ್ತವವಾಗಿ ಸ್ವರತಂತುವಿನ ಕಂಪನ ಆವರ್ತನವೇ ಆಗಿರುತ್ತದೆ.  ಇಂಥ ಒಂದು ಅಲೆಯನ್ನು ಧ್ವನಿಪಥದ ಒಂದು ತುದಿಯಲ್ಲಿ (ಸ್ವರಯಂತ್ರ ಮುಖದಲ್ಲಿ) ಪ್ರಯೋಗಿಸಿದಾಗ ಅದು ತುಟಿಗಳೆಡೆಗೆ ಪ್ರೇಷಣಗೊಳ್ಳುತ್ತದೆ.  ಧ್ವನಿಹುರಿಯ ಅಂಥ ಘಟಕಗಳಿಗೆ ಧ್ವನಿಪಥ ಇನ್ನೂ ಚೆನ್ನಾಗಿ ಪ್ರತಿಕ್ರಿಯೆ ತೋರುತ್ತದೆ.  ಅದರ ಸ್ವಾಭಾವಿಕ ಅವರ್ತನ ಅಥವಾ ಸರಿಸುಮಾರು ಅಷ್ಟಿರುವ ಆವರ್ತವದಲ್ಲಿ ಹ್ರಸ್ವವೂ ತ್ವರಿತವೂ ಆದ ಉಸಿರು (ಪಫ್) ಉಂಟಾಗುತ್ತದೆ.  ಈ ಘಟಕಗಳ ಮೇಲೆ ಒತ್ತು ಬೀಳುತ್ತದೆ.  ಹಾಗೂ ತುಟಿಗಳಿಂದ ಹೊರಬರುವ ಧ್ವನಿಯ ರೋಹಿತ ಧ್ವನಿಪಥದ ಸ್ವಾಭಾವಿಕ ಆವರ್ತನದಲ್ಲಿ  ಶೃಂಗಕ್ಕೇರುತ್ತದೆ.  ಈ ಪ್ರಕ್ರಿಯೆಯನ್ನು ಚಿತ್ರ 1ಚಿ,b,ಛಿ,ಜ,,e ಗಳಲ್ಲಿ ತೋರಿಸಿದೆ.

ಚಿತ್ರ-1

	ಚಿತ್ರ 1ಛಿ ರಲ್ಲಿ ತೋರಿಸಿರುವಂತೆ ಅನುನಾದಕ ಕೇವಲ ಒಂದೇ ಒಂದು ಸ್ವಾಭಾವಿಕ ಆವರ್ತನ ಹೊಂದಿದೆ.  ಆದರೆ ದ್ವನಿಪಥಕ್ಕೆ ಇಂಥ ಬೇಕಾದ ಸ್ವಾಭಾವಿಕಗಳುಂಟು.  ಹಾಗಾಗಿ ಈ ದ್ವನಿ ಅನುನಾದಕ ಧ್ವನಿಹುರಿಯ ಅಲೆಸಂನಾದಗಳ ಮೇಲೆ ಬೇರೆ ಬೇರೆ ಸಂಖ್ಯೆಯ ಆವರ್ತನಗಳಲ್ಲಿ ಒತ್ತು ಹಾಕುತ್ತದೆ.  ದ್ವನಿಪಥದ ಪ್ರತಿಯೊಂದು ಸ್ವಾಭಾವಿಕ ಆವರ್ತನಕ್ಕೆ ಸಂಬಂಧಪಟ್ಟಂತೆ ಮಾತಿನ ಅಲೆಯ ರೋಹಿತದಲ್ಲಿ ಒಂದೊಂದು ಶೃಂಗ ಕಂಡುಬರುತ್ತದೆ.  ಧ್ವನಿಪಥದ ಸ್ವಾಭಾವಿಕ ಆವರ್ತನದ ಬೆಲೆಯನ್ನು ಅದರ ಆಕಾರವನ್ನು ನೋಡಿ ನಿರ್ಧರಿಸುವರು. ತತ್ಪರಿಣಾಮವಾಗಿ   ನಾವು ಪಥದ ಆಕಾರವನ್ನು ಬದಲಾಯಿಸಿದಂತೆಲ್ಲ ರೋಹಿತ ಘಟಕಗಳ ಕಂಪನವೈಶಾಲ್ಯಗಳು ಬೇರೆ ಬೇರೆ ಆವರ್ತನಗಳಲ್ಲಿ ಶೃಂಗಕ್ಕೇರುತ್ತವೆ.

		ದ್ವನಿಪಥದಲ್ಲಿ ಕಂಡುಬರುವ ಅನುನಾದಗಳನ್ನು ಉನ್ನಾದಗಳು ಎಂದು ಕರೆಯುತ್ತಾರೆ.  ಆ ಆವರ್ತನಗಳಿಗೆ ಉನ್ನಾದ ಆವರ್ತಗಳೆಂದು ಹೆಸರು.  ಸ್ವರಧ್ವನಿಗಳ ಭಾಷಾ ರೋಹಿತವನ್ನು ವಿಶ್ಲೇಷಿಸಿದಾಗ ಕೆಲವು ಆವರ್ತನ ಕ್ಷೇತ್ರಗಳಲ್ಲಿ ಸಾಪೇಕ್ಷವಾಗಿ ಹೆಚ್ಚಿನ ಕಂಪನ ವೈಶಾಲ್ಯಗಳು ಇರುವುದು ಕಂಡುಬರುತ್ತದೆ. ಇವೇ ಉನ್ನಾದಗಳು.  ಇವು ದ್ವನಿಪಥದಲ್ಲಿರುವ ಗಾಳಿಯ ಕಂಪನದಿಂದುಂಟಾದ ಮೂಲಭೂತ ಆವರ್ತಗಳಿಗೆ ಅನುಗುಣವಾಗಿರುತ್ತವೆ.  ಒಂದು ಧ್ವನಿಯ ಉನ್ನಾದಗಳು ಅದರ ಗುಣಲಕ್ಷಣಗಳನ್ನು ರೂಪಿಸುವಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆ. ಉನ್ನಾದಗಳು ಆವರ್ತನ ಸಂಖ್ಯೆಗಳು ಸಾಧಾರಣವಾಗಿ ಸಂನಾದಗಳ ಆವರ್ತನ ಸಂಖ್ಯೆಗಳಿಗೆ ಸಮನಾಗಿರುವುದಿಲ್ಲ.  ಕೆಲವು ವೇಳೆ ಅವು ಜೊತೆಗೂಡಬಹುದಷ್ಟೆ.  ಉನ್ನಾದ ಆವರ್ತನಗಳನ್ನು ದ್ವನಿಪಥದ ಆಕಾರದಿಂದಲೂ ಸಂನಾದ ಆವರ್ತನಗಳನ್ನು ಧ್ವನಿಹುರಿಯಿಂದಲೂ ಕಂಡುಹಿಡಿಯುತ್ತಾರೆ.

	ಸ್ವರತಂತುವಿನ ಹುರಿಗಳು ಮತ್ತು ಧ್ವನಿಪಥ ಪರಸ್ಪರ ಅವಲಂಬನೆ ಇಲ್ಲದೆ ಸ್ವತಂತ್ರವಾಗಿ ಚಲಿಸುವುವು.  ನಾಸಿಕ ಕುಹರಗಳನ್ನು ಮುಚ್ಚುತ್ತ ಮೃದುತಾಲುವನ್ನು ಮೇಲಕ್ಕೆ ಮಾಡಿದಾಗ ದ್ವನಿಪಥ ಸ್ವರಯಂತ್ರ ಮುಖದಿಂದ ಹಿಡಿದು ತುಟಿಗಳವರೆಗೆ ಏಳು ಇಂಚುಗಳಷ್ಟು ಉದ್ದವಿರುವ ಒಂದು ನಳಿಕೆಯಾಗುತ್ತದೆ.  ಸಾಧಾರಣವಾಗಿ ದ್ವನಿಪಥದ ಅಡ್ಡ ಛೇದದ ವಿಸ್ತೀರ್ಣ ಅದರ ಉದ್ದಕ್ಕೆ ಅನುಗುಣವಾಗಿ ಬದಲಾಗುತ್ತದೆ ಹಾಗೂ ಅದರ ಉನ್ನಾದ ಆವರ್ತನಗಳ ನಡುವೆ ನಿಯತವಾದ ಅಂತರವಿರುವುದಿಲ್ಲ.  ಅವುಗಳಲ್ಲಿ ಕೆಲವು ಹೆಚ್ಚಿನ ಆವರ್ತನ ಸಂಖ್ಯೆಗಳನ್ನೂ ಉಳಿದವು ಕಡಿಮೆ ಆವರ್ತನ ಸಂಖ್ಯೆಗಳನ್ನೂ ಹೊಂದಿರುತ್ತವೆ.  ಅತ್ಯಂತ ಕನಿಷ್ಠ ಉನ್ನಾದ ಆವತರ್Àನ ಸಂಖ್ಯೆಯನ್ನು ಮೊದಲ ಉನ್ನಾದವೆಂದು, ಅದಾದ ಅನಂತರ ಅದರ ಮುಂದಿನ ಗರಿಷ್ಠ ಆವರ್ತನ ಸಂಖ್ಯೆಯನ್ನು ಎರಡನೆ ಉನ್ನಾದ ಎಂಬುದೇ ಮೊದಲಾಗಿ ಕರೆಯುವರು.  ನಾಸಿಕ ಕುಹರಗಳನ್ನು ಬಾಯೊಡನೆ ಸೇರಿಸುತ್ತ ಮೃದತಲುವನ್ನು ಕೆಳಗೆ ಮಾಡಿದಾಗ ಸಂಪೂರ್ಣವಾಗಿ ಬೆರೆಯದೆ ಆಕೃತಿಯುಳ್ಳ ದ್ವನಿಪಥ ಉಂಟಾಗುತ್ತದೆ.  ಈ ಹೆಚ್ಚುವರಿ ನಾಸಿಕ ಭಾಗದಿಂದಾಗಿ ನಮಗೆ ಈಗ ಬೇರೆ ಬೇರೆ ಉನ್ನಾದಗಳು ದೊರೆಯುತ್ತವೆ;  ಭಾಷಾರೋಹಿತದ ಕೆಲವು ಭಾಗಗಳನ್ನು ಒತ್ತಿಡುವ ಪ್ರತಿ ಅನುನಾದಗಳು ದೊರೆಯುತ್ತವೆ.  ನಾಸಿಕ ಕುಹರಗಳು ಸಹ ಹೆಚ್ಚಿನ ಧ್ವನಿಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಅದರಿಂದಾಗಿ ಅವಮಂದನ ಹೆಚ್ಚಾಗುತ್ತದೆ.  ಇವು ಉನ್ನಾದಗಳ ಕಂಪನವೈಶಾಲ್ಯವನ್ನು ಕಡಿಮೆ ಮಾಡುತ್ತದೆ.

	ಭಾಷಾಸಂಕೇತಗಳ ಮೂಲಭೂತ ತರಂಗಾತ್ಮಕ ಗುಣಗಳು :  ಭಾಷಾಧ್ವನಿಗಳ ತರಂಗಾತ್ಮಕ ವಿನ್ಯಾಸಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವನ್ನು ವಿಭಜನೆ ಮಾಡುವಷ್ಟರ ಮಟ್ಟಿಗೆ ಧ್ವನಿವಿಜ್ಞಾನದ ವಿಚಾರದಲ್ಲಿ ನಮ್ಮ ಜ್ಞಾನ ಹೆಚ್ಚಾಗಿದೆ.  ವಾಸ್ತವವಾಗಿ ಇಂಥ ಪ್ರಯತ್ನಗಳನ್ನು ಜಾಕಬ್‍ಸನ್, ಫಾಂಟ್ ಮತ್ತು ಹ್ಯಾಲೆ ಅವರು ಸುಮಾರು ಎರಡು ದಶಕಗಳ ಹಿಂದೆಯೆ ನಡೆಸಿದ್ದರು.  ತಮ್ಮ ಪ್ರಿಲಿಮಿನರೀಸ್ ಟು ಸ್ಪೀಚ್ ಅನ್ಯಾಲಿಸಿಸ್ (1956)ಎಂಬ ಹೊತ್ತಿಗೆಯಲ್ಲಿ ಅವರು ಮನುಷ್ಯನ ಭಾಷೆಯಲ್ಲಿರುವ ತರಂಗಾತ್ಮಕ ವಿಭೇದಗಳನ್ನು ಕುರಿತಂತೆ ಒಂದು ಸೂಚಿಯನ್ನೆ ಕೊಡುವ ಪ್ರಯತ್ನ ಮಾಡಿದ್ದಾರೆ.  ಸ್ವರಗಳನ್ನು ಮತ್ತು ವ್ಯಂಜನಗಳನ್ನು ಬೇರೆ ಬೇರೆಯಾಗಿ ಗುರುತಿಸುವಲ್ಲಿ ಪೈಕ್ ಸ್ವನತ್ವ ನಿರ್ಣಾಯಕ ಮತ್ತು ಘರ್ಷಣ ನಿರ್ಣಾಯಕ ಎಂಬ ಎರಡು ತರಂಗಾತ್ಮಕ ನಿರ್ಣಾಯಕಗಳ ಮೌಲ್ಯವನ್ನು ಕುರಿತು ಚರ್ಚೆ ಮಾಡಿದ್ದಾನೆ(1943). ಈ ರೀತಿಯ ಯಾವುದೇ ಭಾಷಾಧ್ವನಿಗಳ ತರಂಗಾತ್ಮಕ ವರ್ಗೀಕರಣ ಭಾಷಾಸಂಕೇತಗಳ ಮೂಲಭೂತವಾದ ತರಂಗಾತ್ಮಕ ಗುಣಗಳ ಬಗ್ಗೆ ಪಡೆದಿರುವ ಅರಿವನ್ನು ಅವಲಂಬಿಸಿರುತ್ತದೆ.  ಆದ್ದರಿಂದ ಭಾಷಾಸಂಕೇತಗಳಿಗೆ ಸಂಬಂಧಿಸಿದ ಕೆಲವು ಮೂಲಭೂತವಾದ ತರಂಗಾತ್ಮಕ ಗುಣಗಳ ಯಾವುವು ಎಂಬುದನ್ನು ಪರಿಚಯ ಮಾಡಿಕೊಳ್ಳುವುದು ಉಚಿತ.

	ಅ) ನಿಯತಕಾಲಿಕತೆ ಹಾಗೂ ಅನಿಯತಕಾಲಿಕತೆ :  ಭಾಷೆಯ ತರಂಗಾತ್ಮಕ ಸಂಕೇತಗಳನ್ನು ಎರಡು ವ್ಯಾಪಕ ವರ್ಗಗಳಾಗಿ ಈ ಕೆಳಕಂಡಂತೆ ವಿಂಗಡಿಸಬಹುದು:  (1) ತಮ್ಮ ಕಂಪನ ಲಕ್ಷಣಗಳಲ್ಲಿ ಸಾಪೇಕ್ಷವಾಗಿ ನಿಯತಕಾಲಿಕವಾಗಿರುವಂಥ ಸಂಕೇತಗಳು ಮತ್ತು (2)  ಇಂಥ ನಿಯತಕಾಲಿಕತೆ ಇಲ್ಲದಿರುವಂಥ ಸಂಕೇತಗಳು.  ಮೊದಲನೆಯದರಲ್ಲಿ ಕಂಡುಬರುವಂತೆ ಒಂದು ಕಂಪನ ಮಾದರಿಯಲ್ಲಿ ನಿಯತಕಾಲಿಕತೆ ಇದೆಯೆಂದರೆ ಅದರ ಹಿನ್ನೆಲೆಯಿರುವ ಧ್ವನಿ ಉತ್ಪಾದಕ ಮೂಲದಲ್ಲಿ ಸಹ ಅದಕ್ಕನುಗುಣವಾಗಿ ನಿಯತಕಾಲಿಕತೆ ಲಕ್ಷಣವುಳ್ಳ ಚಲನೆಯುಂಟೆಂದು ಅರ್ಥವಾಗುತ್ತದೆ.  ಮಾನವ ಧ್ವನಿವ್ಯವಸ್ಥೆಯಲ್ಲಿ ಸ್ವರಯಂತ್ರ ಅಥವಾ ಧ್ವನಿಪೆಟ್ಟಿಗೆ ಇಂಥ ಆಕಾರವನ್ನು ಒದಗಿಸುತ್ತದೆ.  ಈ ರೀತಿಯ ಉಚ್ಚಾರಣೆಯಿಂದ ಹೊರಬಂದ ಎಲ್ಲ ದ್ವನಿಗಳೂ ಮೊದಲನೆಯ ವರ್ಗಕ್ಕೆ ಸೇರುತ್ತವೆ.  ಇವುಗಳಲ್ಲಿ ಸ್ವರಧ್ವನಿಗಳು ಹಾಗೂ ಎಲ್ಲ ಘೋಷವ್ಯಂಜನಗಳೂ ಸೇರಿಕೊಳ್ಳತ್ತವೆ.  ನಿಯತ ಕಾಲಿಕವಾದ ಧ್ವನಿಗಳನ್ನು ಸಾಧಾರಣವಾಗಿ ನಾದಗಳೆಂದು ಕರೆಯುತ್ತಾರೆ.  ಅನಿಯತ ಕಾಲಿಕವಾದ ಧ್ವನಿಗಳನ್ನು ಸಾಮಾನ್ಯವಾಗಿ ಗಲಾಟೆಯನ್ನುವುದುಂಟು.  ಅಘೋಷ ವ್ಯಂಜನಗಳೆಲ್ಲ ಎರಡನೆ ವರ್ಗಕ್ಕೆ ಸೇರುವಂಥವು.

	ಕೆಲವು ವೇಳೆ ಧ್ವನಿಪೆಟ್ಟಿಗೆಯಲ್ಲಿ ಏಕಕಾಲಿಕವಾಗಿ ಉಂಟಾಗುವ ನಿಯತ ಕಾಲಿಕ ಮತ್ತು ಅನಿಯತಕಾಲಿಕ ಕಂಪನ ಮಾದರಿಗಳಿಂದ ಧ್ವನಿಕುಹರಗಳಲ್ಲಿರುವ ಗಾಳಿ ಉತ್ತೇಜಿತವಾಗಿ ಕೆಲವು ವ್ಯಂಜನ ಧ್ವನಿಗಳು ಹೊರಬೀಳುತ್ತವೆ.  ಇವೇ ಘೋಷ ಸಂಘರ್ಷ ವ್ಯಂಜನಗಳು ಮತ್ತು ಘೋಷೀಕೃತವಾದ ಸ್ಪರ್ಶ ಸಂಘರ್ಷ ಧ್ವನಿಗಳು.

	ಆ) ಅವಧಿ :  ಇದು ಸಹ ಬಹಳ ಮಹತ್ತ್ವ ಪೂರ್ಣವಾದ ಒಂದು ತರಂಗಾತ್ಮಕ ಆಯಾಮ. ಸಂಘರ್ಷ ಧ್ವನಿಗಳನ್ನೂ ಒಳಗೊಂಡಂತೆ ಸ್ವರಗಳನ್ನೂ ಇತರ ಅನೇಕ ವ್ಯಂಜನಗಳನ್ನೂ ಸಾಕಷ್ಟು ದೀರ್ಘಕಾಲ ಉಚ್ಚಾರಮಾಡಬಲ್ಲೆವು.  ಇದಕ್ಕೆ ವ್ಯತಿರಿಕ್ತವಾಗಿ ಸ್ಪರ್ಶ ಸಂಘರ್ಷ ಧ್ವನಿಗಳು ಅವಶ್ಯವಾಗಿ ಹ್ರಸ್ವವಾದವು ಮತ್ತು ಕಡಿಮೆ ಕಾಲವನ್ನು ತೆಗೆದುಕೊಳ್ಳತ್ತವೆ.  ಏಕೆಂದರೆ ಅವುಗಳಿಗೆ ಸ್ಪಂದನ ಉತ್ತೇಜನಗಳಷ್ಟೇ ಸಾಕು.  ಭಾಷಾ ಪ್ರಮಾಣ ವರ್ಣಾತ್ಮಕ ಬಾಲಾಘಾತ ಮುಂತಾದುವುಗಳ ಅವಶ್ಯಕತೆಗನುಗುಣವಾಗಿ ಭಾಷಾಧ್ವನಿಗಳ ಅವಧಿಯಲ್ಲಿ ವೈಪರಿತ್ಯವನ್ನು ಕಾಣಬಹುದು. ತರಂಗಾತ್ಮಕ ಸಂಕೇತದ ಕಾಲ ಆಯಾಮ ಕಾಲ ಸೂಚಕ ಉಚ್ಚಾರಣಾನುಕ್ರಮಗಳ ಸಹಸಂಬಂಧಿಯಾಗಿದ್ದು ವಿಭಜನೀಯ ಮತ್ತು ಅವಿಭಜನೀಯ ಧ್ವನಿ ವೈಲಕ್ಷಣ್ಯಗಳನ್ನೂ ಒಳಗೊಂಡಂತೆ ಯಾವುದೇ ಭಾಷಾವಿವರಣೆಯಲ್ಲೂ ಕಂಡುಬರಬಹುದು.

	ಇ) ಕಂಪನ ವೈಶಾಲ್ಯ :  ಭಾಷಾಧ್ವನಿಗಳು ತಮ್ಮ ಶಕ್ತಿಮಟ್ಟಗಳಿಗೆ ಅನುಗುಣವಾಗಿ ತಮ್ಮ ಲಕ್ಷಣಗಳಲ್ಲಿ ಬದಲಾವಣೆಯನ್ನು ತೋರುತ್ತವೆ.  ಉದಾಹರಣೆಗೆ ಸ್ವರಗಳಿಗೆ ಹೆಚ್ಚಿನ ಸರಾಸರಿ ಧ್ವನಿ ಶಕ್ತಿಮಟ್ಟಗಳುಂಟು.  ಹಾಗೆಯೇ ಕೆಲವು ವ್ಯಂಜನಗಳಿಗೆ ಉಳಿದವುಗಳಿಗಿಂತ ಮೇಲ್ಮಟ್ಟದ ಶಕ್ತಿಮಟ್ಟಗಳುಂಟು.

	ಯಾವುದೇ ಧ್ವನಿಯ ಶಕ್ತಿಮಟ್ಟ ಆ ಧ್ವನಿಯ ಅಲೆಯನ್ನು ಉಂಟುಮಾಡುವ ಕಂಪನದ ವೈಶಾಲ್ಯಕ್ಕೆ ಅನುಗುಣವಾಗಿ ಇರುವುದರಿಂದ, ಕಂಪನ ವೈಶಾಲ್ಯ ಎಂಬ ಉಕ್ತಿಯನ್ನು ಸಾಧಾರಣವಾಗಿ ಈ ಆಯಾಮವನ್ನು ಸೂಚಿಸಲು ಬಳಸುವರು.

	ಈ) ರೋಹಿತ ರಚನೆ :  ಬೇರೆ ಬೇರೆ ಭಾಷಾಧ್ವನಿಗಳ ನಡುವೆ ಕಂಡುಬರುವ ಧ್ವನ್ಯಾತ್ಮಕ ಭೇದಗಳನ್ನು ತಿಳಿದುಕೊಳ್ಳಲು ಸಹಾಯಮಾಡುವ ಭಾಷಾ ಸಂಕೇತಗಳ ತರಂಗಾತ್ಮಕ ಗುಣಗಳನ್ನು ವಿವರಿಸುವ ಕಾರ್ಯದಲ್ಲಿ ರೋಹಿತ ರಚನೆ ಎಂದು ಕರೆಯಬಹುದಾದ ಈ ನಾಲ್ಕನೆಯ ಗುಣ ಬಹಳ ಮಹತ್ತ್ವಪೂರ್ಣವಾದುದು. ಭಾಷೆಯ ಗ್ರಾಹ್ಯ  ಪಕ್ಷವನ್ನು ಕುರಿತಂಥ ಧ್ವನಿಗುಣ ಎಂಬುದಕ್ಕೆ ಸಂಬಂಧಿಸಿದಂತೆಯೂ ಭಾಷಾಸಂಕೇತಗಳ ರೋಹಿತರಚನೆ ಬಹು ಮುಖ್ಯ ಪಾತ್ರ ವಹಿಸುತ್ತದೆ.  ಉದಾಹರಣೆಗೆ ಅನುನಾಸಿಕತೆ ಎಂಬುದು ಇಂಥ ಒಂದು ಧ್ವನಿಗುಣ.

	ಜಟಿಲವಾದ, ನಿಯತಕಾಲಿಕವಾದ ಧ್ವನಿಗಳ ರೋಹಿತ ರಚನೆ ಬೇರೆ ಬೇರೆಯಾದ ಸಂಗತವಾಗಿ ಸಂಬಂಧವುಳ್ಳ ಘಟಕಗಳ ನಡುವೆ ಶಕ್ತಿಯ ವಿತರಣೆ ಯಾವ ರೀತಿಯಲ್ಲಿದೆ ಎಂಬುದನ್ನು ವಿಶಿಷ್ಟವಾಗಿ ಸೂಚಿಸುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ, ಅನಿಯತಕಾಲಿಕವಾದ ಧ್ವನಿಗಳ ರೋಹಿತ ರಚನೆಗಳು ಯಾವುದೇ ಆವರ್ತನದಲ್ಲಿ ಶಕ್ತಿ ಹೇಗಿರುತ್ತದೆಂಬುದನ್ನು ತೋರಿಸಬಹುದು.

	ತರಂಗಾತ್ಮಕ ಧ್ವನಿವಿಜ್ಞಾನದ ವಿಧಾನಗಳು :  ಭಾಷೆಯ ಉತ್ಪಾದನೆಯಲ್ಲಿ ಕಂಡುಬರುವ ತರಂಗಾತ್ಮಕ ವಿನ್ಯಾಸವನ್ನು ಮತ್ತು ಭಾಷಾಧ್ವನಿಗಳ ಗುಣಲಕ್ಷಣಗಳನ್ನು ಪರೀಕ್ಷಿಸಲು ತರಂಗಧ್ವನಿ ವಿಜ್ಞಾನಿ ಬೇರೆ ಬೇರೆ  ವಿಧಾನಗಳನ್ನು ಬಳಸುತ್ತಾನೆ. ಅಗತ್ಯವಾದ ಮಾಪನಗಳನ್ನು ಮಾಡಲು ಉಪಕರಣಗಳನ್ನು ಈಚೆಗೆ ಅಭಿವೃಧ್ದಿಪಡಿಸಲಾಗಿದೆ.  ಧ್ವನಿಯ ಉಚ್ಚಾರಣೆಯ ಅರ್ಥ ಗ್ರಾಹ್ಯತೆಯನ್ನು ಅರಿಯಲು ಧ್ವನಿಗಳನ್ನು ಬೇರೆ ಬೇರೆ ದರ್ಜೆಗಳಲ್ಲಿ ವಿಂಗಡಿಸುವ ಉಪಕರಣಗಳು ಬಳಕೆಗೆ ಬಂದಿವೆ.  ಸಾಧರಣವಾಗಿ ತರಂಗಧ್ವನಿವಿಜ್ಞಾನಿಗಳು ಬಳಸುವ ಅತ್ಯಮೂಲ್ಯವಾದ ಕೆಲವು ತರಂಗಾತ್ಮಕ ಉಪಕರಣಗಳು ಇವು:

	ಆಂದೋಲನಲೇಖಿ :  ಕ್ಯಾತೋಡ್ ಕಿರಣ ಆಂದೋಲನಲೇಖಿ ವೋಲ್ಟತೆ ಅಥವಾ ಪ್ರವಾಹದ ಅಲೆಮಾದರಿಗಳನ್ನು ಪ್ರತಿದೀಪ್ತವಾದ ಪರದೆಯೊಂದರ ಮೇಲೆ ತೋರಿಸುವ ಒಂದು ಎಲೆಕ್ಟ್ರಾನಿಕ್ ಉಪಕರಣ.  ಧ್ವನಿಗಳ ಅಲೆಮಾದರಿಗಳಲ್ಲಿ ಕಂಡುಬರುವ ಜಟಿಲತೆಯನ್ನು ಕುರಿತು ಅಧ್ಯಯನಮಾಡಲು ಇದು ಬಹಳ ಉಪಯುಕ್ತವಾದುದು.	ಧ್ವನಿರೋಹಿತಲೇಖಿ :  ಸುಮಾರು 2.4 ಸೆಕೆಂಡುಗಳಷ್ಟು ಅವಧಿಯ ಸಂಕೇತವೊಂದರ ರೋಹಿತವನ್ನು ತ್ವರಿತವಾಗಿ ತೋರಿಸುವಲ್ಲಿ ಇದು ಬಹಳ ಅನುಕೂಲವಾದ ಸಾಧನ.  ಒಂದು ಬಾರಿಗೆ ಇದು ಒಂದು ಪಟ್ಟಿಯನ್ನು ವಿಶ್ಲೇಷಣೆ ಮಾಡುತ್ತದೆಯಲ್ಲದೆ ಜಟಿಲ ಅಲೆಯೊಂದರ ಸರಳ ಆಂದೋಲನಗಳನ್ನು ಪರಿಸೀಲಿಸಿ ಪ್ರತಿಯೊಂದು ಪಟ್ಟಿಯಲ್ಲಿಯೂ ಇರುವ ತೀವ್ರತೆಯ ಭಿನ್ನತೆಯನ್ನು ಹಾಳೆಯೊಂದರ ಮೇಲೆ ಪಕ್ಕಪಕ್ಕವಾಗಿ ಚೊಕ್ಕವಾಗಿ ಬರೆದು ತೋರಿಸುತ್ತದೆ.  ಇದರ ಫಲವಾಗಿ ಧ್ವನಿಯ ದೃಕ್‍ಮಾದರಿಯೊಂದು ಅದರ ಮೂರು ಆಯಾಮಗಳಲ್ಲಿ (ಆವರ್ತನ, ತೀವ್ರತೆ ಮತ್ತು ಕಾಲ) ಕಂಡುಬರುತ್ತದೆ.

	ಕಂಠದರ್ಶಿಲೇಖಿ (ಲ್ಯಾರಿಂಜೋಗ್ರಾಫ್) :  ಈ ಎಲೆಕ್ಟ್ರಾನಿಕ ಉಪಕರಣವನ್ನು ಧ್ವನಿಪೆಟ್ಟಿಗೆಯಲ್ಲಿ ಕಂಡುಬರುವ ಕಂಪನಗಳಲಕ್ಷಣಗಳನ್ನು ಕುರಿತು ಅಧ್ಯಯನ ಮಾಡಲು ಬಳಸುತ್ತಾರೆ,  ಸ್ವರಾಘಾತದ ಮಾದರಿಗಳ ಅಧ್ಯಯನದಲ್ಲಿಯೂ ಇದು ಬಹಳ ಉಪಯುಕ್ತವೆನಿಸಿದೆ.

	ವಿನ್ಯಾಸಪ್ರತಿಶ್ರವಣಯಂತ್ರ : ಧ್ವನಿರೋಹಿತಲೇಖಿ ಹೋಲಿಸಿದಲ್ಲಿ ಇದು ಹಿಮ್ಮುಕವಾಗಿ ಕೆಲಸಮಾಡುವ ಒಂದು ಯಂತ್ರ.  ಸಂಶ್ಲೇಷಿತ ಧ್ವನಿಯನ್ನು ಇದು ಉತ್ಪಾದಿಸುತ್ತದೆ.  ರೋಹಿತಮಾದರಿಗಳನ್ನು ಸ್ವೀಕರಿಸಿ, ಒಂದು ಬೆಳಕಿನ ದಂಡದಿಂದ ಅವನ್ನು ಅಂಕೇಕ್ಷಣ ಮಾಡಿ ಆ ವಿನ್ಯಾಸಕ್ಕನುಗುಣವಾದ ಧ್ವನಿ ಅಲೆಯನ್ನು ಇದು ಹೊರಗೆಡಹುತ್ತದೆ.  ಕೈಗಳಿಂದ ಚಿತ್ರಿಸಿದ ಇಂಥ ವಿನ್ಯಾಸಗಳನ್ನು ಒಂದು ಪ್ಲಾಸ್ಟಿಕ್ ಬೆಲ್ಟಿನ ಮೇಲೆ ಹರಿಯುವಂತೆ ಮಾಡಿ ಅದನ್ನು ಪ್ರತಿಶ್ರವಣ ಮಾಡುವುದರಮೂಲಕ ಕೃತಕ ಧ್ವನಿಗಳನ್ನೂ ಉತ್ಪಾದನೆ ಮಾಡುತ್ತಾರೆ.  ವ್ಯಂಜನಧ್ವನಿಗಳನ್ನು ಗುರುತಿಸಬೇಕಾದರೆ ಅವಶ್ಯಕವಾದ ಅವುಗಳ ತರಂಗಾತ್ಮಕ ಲಕ್ಷಣಗಳ ಬಗೆಗೆ ನಾವು ಎಷ್ಟು ಜ್ಞಾನವನ್ನು ಪಡೆದಿದ್ದೇವೆಯೋ ಅದರಲ್ಲಿನ ಬಹಳಷ್ಟು ಭಾಗವನ್ನು ಈ ಯಂತ್ರದಲ್ಲಿ ಸಂಶ್ಲೇಷಣೆ ಮಾಡಿದ ಧ್ವನಿಗಳಿಂದ ಪಡೆದಿದ್ದೇವೆ.										(ವಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ